ಭಾಮಿನೀ

1 ಗಂಧರ್ವರಾಜನ ಮಗಳು, ಹುಡುಗಾಟಿಕೆ ಮಾಡಲು ಹೋಗಿ ಅಗಸ್ತ್ಯನನ್ನು ರೇಗಿಸಿ ಭೂಲೋಕದಲ್ಲಿ ವಿಶಾಲನೆಂಬ ರಾಜನಿಗೆ ವೈಶಾಲಿನಿ ಎಂಬ ಹೆಸರಿನಿಂದ ಜನಿಸಿದಳು. ಸ್ವಯಂವರ ಸಂದರ್ಭದಲ್ಲಿ ಕರಂಧಮ ಮತ್ತು ವೀರೆಯ ಮಗ ಅವೀಕ್ಷಿತನಿಂದ ತಿರಸ್ಕøತೆಯಾದ ಈಕೆ ಹೇಗಾದರೂ ಅವನನ್ನೇ ಮದುವೆಯಾಗಬೇಕೆಂದು ಅಡವಿಗೆ ಹೋಗಿ ತಪಸ್ಸು ಮಾಡತೊಡಗಿದಳು. ಆ ಸಮಯದಲ್ಲಿ ದೃಢಕೇಶನೆಂಬ ರಾಕ್ಷಸ ಕೈ ಮಾಡಿದಾಗ ವೈಶಾಲಿನಿ ಆರ್ತಧ್ವನಿಯಿಂದ ಮೊರೆಯಿಟ್ಟಳು. ಬೇಟೆಗೆ ಬಂದಿದ್ದ ಅವೀಕ್ಷಿತ ಇದನ್ನು ಕೇಳಿ ಅಲ್ಲಿಗೆ ಬಂದು ದೃಢಕೇಶನನ್ನು ಕೊಂದ. ಆಗ ಗಂಧರ್ವರಾಜ ಅಲ್ಲಿಗೆ ಬಂದು ತನ್ನ ಮಗಳ ಪೂರ್ವೋತ್ತರಗಳನ್ನು ತಿಳಿಸಿ ಅವಳನ್ನು ಮದುವೆಯಾಗುವಂತೆ ಹೇಳಿದ. ಅವೀಕ್ಷಿತ ಯೋಚನೆಗೀಡಾದಾಗ ರಾಕ್ಷಸನ ಸಂಹಾರದಿಂದ ಸಂತುಷ್ಟರಾದ ದೇವತೆಗಳು ಅಲ್ಲಿಗೆ ಬಂದು ಅವೀಕ್ಷಿತನನ್ನು ವರಕೇಳುವಂತೆ ಹೇಳಿದರು. ಅದಕ್ಕೆ ಅವೀಕ್ಷಿತ ನಾನು ತಂದೆಯ ಸತ್ಯಪಾಶ ಬದ್ಧನಾಗಿದ್ದೇನೆ. ಅನನ್ಯಭಾವನೆಯಿಂದ ನನ್ನನ್ನು ವರಿಸಿದ್ದ ವೈಶಾಲಿನಿಯನ್ನು ತ್ಯಾಗಮಾಡಿ ಇವಳನ್ನು ವರಿಸುವುದು ಕ್ರೌರ್ಯವಲ್ಲವೇ ಎಂದು ಕೇಳಿದ. ಆಗ ದೇವತೆಗಳು ಇವಳು ಅದೇ ವೈಶಾಲಿನಿಯೆಂದು ಹೇಳಿದಾಗ ಅವೀಕ್ಷಿತ ವಿಧಿವಿಲಾಸಕ್ಕೆ ತಲೆದೂಗಿ ವೈಶಾಲಿಯನ್ನು ಪರಿಗ್ರಹಿಸಿದ. ಅನಂತರ ಗಂಧರ್ವ ಲೋಕಕ್ಕೆ ಹೋಗಿ ಕೆಲಕಾಲ ಇದ್ದು ಲೋಕೋತ್ತರ ಗುಣಸಂಪನ್ನನಾದ ಮಗನನ್ನು ಪಡೆದ. ಅಶರೀರವಾಣಿ ಮಗುವಿನ ಭವಿಷ್ಯ ನುಡಿದಾಗ ಅಲ್ಲಿ ಸೇರಿದ್ದ ದೇವತೆಗಳು ಮಗುವಿಗೆ ಮರುತ್ತನೆಂದು ಹೆಸರಿಟ್ಟರು. ಅವೀಕ್ಷಿತ ಪತ್ನೀ ಪುತ್ರರೊಂದಿಗೆ ಪಟ್ಟಣ ಬಂದು ಜನನೀ ಜನಕರಿಗೆ ವಂದಿಸಿ ಕಿಮಿಚ್ಛಕವ್ರತದಲ್ಲಿ (ಯಾರು ಏನು ಕೇಳಿದರೂ ಇಲ್ಲವೆನ್ನದೆ ದಾನ ಮಾಡುವ ವ್ರತ) ತಂದೆಗೆ ತಾನು ಕೊಟ್ಟಭಾಷೆಯನ್ನು ಪೂರ್ತಿಗೊಳಿಸಿರುವುದಾಗಿ ಹೇಳಿದ. ಮುಂದೆ ಕರಂಧಮ ಮೊಮ್ಮಗನಾದ ಮರುತ್ತನಿಗೆ ಪಟ್ಟಕಟ್ಟಿ ತಾನು ಪತ್ನಿಯೊಂದಿಗೆ ತಪಸ್ಸು ಮಾಡಲು ಕಾಡಿಗೆ ಹೋದ.

2 ಕನ್ನಡ ಕಾವ್ಯಗಳಲ್ಲಿ ಬಳಸಿರುವ ಷಟ್ಪದಿಗಳಲ್ಲಿ ಒಂದು. ಆರುಸಾಲಿನ ಈ ಪದ್ಯದಲ್ಲಿ ಮೂರು ಮಾತ್ರೆಯ ಗಣದ ಅನಂತರ ನಾಲ್ಕು ಮಾತ್ರೆಯ ಗಣದಂತೆ, ಒಂದು ಎರಡು ನಾಲ್ಕು ಐದನೆ ಪಾದಗಳಲ್ಲಿ ಎರೆಡೆರಡು ಜೋಡಿಯೂ ಮೂರು ಆರನೆಯ ಪಾದಗಳಲ್ಲಿ ಮೂರು ಮೂರು ಜೋಡಿಯೂ ಬಂದು ಕಡೆಯಲ್ಲಿ ಒಂದೊಂದು ಗುರು ಉಳಿಯುವುದು ಭಾಮಿನೀ ಷಟ್ಪದಿಯ ಲಕ್ಷಣ.
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ